ಪ್ರಭುಸತ್ಯದ ಬೆನ್ನೇರಿ ಶಿವಸತ್ಯದ ಸಾಂಸ್ಥಿಕತೆಯಲ್ಲಿ ವಿರಮಿಸಿದ ರಾಘವಾಂಕ
Abstract
ಕನ್ನಡ ಅಕ್ಷರಜಗತ್ತಿನ ಅತಿಪ್ರಚುರವಾದ ಕನ್ನಡಮಟ್ಟು ಪ್ರಾಯಶಃ ಷಟ್ಟದಿಯೇ. ಈ ಅಂಶಗಣಬದ್ದ ದೇಸೀಮಟ್ಟು ಮಾತ್ರಾಬಂಧಕ್ಕೆ ಹೊರಳಿ, ನೂರಾರು ಷಟ್ಟದಿಗಳ ನಡುವಿನ ಏಕಸೂತ್ರತೆಯಲ್ಲಿ ಪ್ರವಾಹದಂತೆ ನುಗ್ಗಿಬರುವ ಕತೆಯ ಹರಿವಿಗೆ ಪೂರಕವಾಯ್ತು. ಕನ್ನಡದ ಈ ಛಾಂದಸಿಕ ತಿರುವಿನಿಂದಾಗಿ ಷಟ್ಟದಿಯು ಪುರಾಣ ಮತ್ತು ಇತಿಹಾಸಗಳೆಂಬ ಎರಡೂ ಮಾದರಿಗೆ ಕಥನಮಾಧ್ಯಮವಾಯ್ತು. ಪೂರ್ವಾರ್ಧ, ಉತ್ತರಾರ್ಧದ ಸಮತುಂಡುಗಳಲ್ಲಿ ಒಂದು ಪೂರ್ಣಾನುಭವವನ್ನು ತುಂಬಬಲ್ಲ, ಸಹಜ ಸಂಗೀತಾಂಶವುಳ್ಳ 'ಹೇಳತೇನ ಕೇಳ'ದ ಈ ಸಾಮಾನ್ಯರ ಮಾದರಿ ಜನರ ಮಾದರಿಯೆನಿಸಿತು. ಹೀಗೆ ತಾಳಪ್ರಧಾನ ಗೇಯತೆಗೆ ತಿರುಗಿದ ಕನ್ನಡಕಾವ್ಯಕ್ಕೆ ಹಾಳತವಾಗಿ ಒದಗಿಬಂದ ಷಟ್ಟದಿ ಆವರೆಗಿನ ತನ್ನ ಜಢತೆಯನ್ನು ಕಳಚಿ, ಛಾಂದಸಿಕರೆಂದಂತೆ 'ಷಟ್ಟರಣವುಳ್ಳ ದುಂಬಿ'ಯಾಗಿ ಝೇಂಕರಿಸಿತು. ವೈವಿಧ್ಯದ ಬಿಡಿಪದ್ಯಕ್ಕೆ ಸೀಮಿತವಾಗಿದ್ದ ಮದ್ದೊಂದು ಮಹಾಕಾವ್ಯದ ಮಾಧ್ಯಮವಾಯ್ತು. ಆದರೆ ಕನ್ನಡಕಾವ್ಯದ ಈ ಯಾನಕ್ಕೆ ಚಾಲನೆಕೊಟ್ಟ ಹೆಗ್ಗಳಿಕೆ 'ಜನ ಬದುಕಬೇಕೆಂದು ಕಾವ್ಯಮುಖದಿಂದ ಹೇಳ'ಹೊರಟ ಷಟ್ಟದಿ ಪ್ರಚಾರಕ, ವಾರ್ಧಕದ ಜನಕ ರಾಘವಾಂಕನದು.







