ಆತ್ಮ-ಜೀವ-ತತ್ವಂದ್ರಿಯಗಳ ಕುಲ ಯಾವುದೆಂದವನೊಳಗಿನ ಕುಲದ ಹೊಯ್ದಾಟ
Abstract
ಕನಕನನ್ನು ಕೆಣಕಬೇಡ ಕಣಕಿ ತಿಣುಕಬೇಡ ಅನ್ನುವುದೊಂದು ಮಾತಿದೆ. ಪ್ರಾಯಶಃ ಈ ಮಾತು ಕನಕನನ್ನು ವಿವರಿಸಿಕೊಳ್ಳಬಹುದಾದ ವೈವಿಧ್ಯತೆಯ ಸಾಧ್ಯತೆಯನ್ನೇ ಸೂಚಿಸುತ್ತಿರಬಹುದು. ಕನಕನಲ್ಲಿ ಅಂತಹ ವೈವಿಧ್ಯತೆಗೆ ಬೇಕಾದ ಕಾರಣಗಳೂ ಇವೆ. ಯಾಕೆಂದರೆ ಮಧ್ಯಕಾಲೀನಯುಗದ ಈ ಕವಿ, ಕೀರ್ತನಕಾರ ತನ್ನ ಕಾಲದ ಅನೇಕ ತಲ್ಲಣಗಳಿಗೆ ಕೊರಳಾದವನು. ವರ್ತಮಾನದ ನಿರಾಸೆಗೆ ಎದುರಾಗಿ ಪರ್ಯಾಯಗಳ ಹುಡುಕಾಟದಲ್ಲಿ ತೊಡಗಿಕೊಂಡವನು. ಆತನ ಪಠ್ಯಾಯಗಳ ಹುಡುಕಾಟದಲ್ಲಿ ನಮ್ಮ ಕಾಲದ ಸಂಕಟಗಳಿಗೂ ಉತ್ತರಗಳನ್ನು ಹುಡುಕಿಕೊಳ್ಳುವ ಪ್ರೇರಣೆಗಳಿವೆ. ಹೀಗಾಗಿ ಆತ ಮತ್ತೆ ಮತ್ತೆ ನಮಗೆ ಪ್ರಸ್ತುತವಾಗುತ್ತಲೇ ಇರುವಂತೆ ಭಾಸವಾಗುತ್ತಾನೆ. ಕನಕನಲ್ಲಿರುವ ಹೊರಚಾಚುಗಳೇ ಆತನನ್ನು ಮತ್ತೆ ಮತ್ತೆ ಎದುರುಗೊಂಡು ನಮ್ಮ ಕಾಲದ ತಲ್ಲಣಗಳಿಗೆ ಮದ್ದು ಹುಡುಕಿಕೊಳ್ಳುವ ಪ್ರೇರಣೆಗಳಾಗುತ್ತಿವೆ. ಆದರೆ ಕನಕನ ಈ ವೈವಿಧ್ಯತೆಗಳೇ ಕೆಲವೊಮ್ಮೆ ತಮ್ಮ ತಮ್ಮೊಳಗೆ ಎದುರು ಬದುರಾಗಿಯೂ ನಿಲ್ಲುವುದುಂಟು. ಈ ದ್ವಂದ್ವ ಕನಕನಲ್ಲಿರುವ ಹೊರಚಾಚುಗಳನ್ನು ಸಪಾಟುಗೊಳಿಸಿ ವಿವರಣೆಗೊಳಪಡಿಸುವ ರೂಢಿವಾದಕ್ಕೂ ನೆರವಾದುದಿದೆ. ಆತನೊಳಗೊಂದು ಪಾಂಥಿಕ ಏಕಶಿಲೆ ನೆಟ್ಟು, ವೈಷ್ಣವತೆಯ ತ್ರಿಪುಂಡ್ರದೊಳಗೆ ಅಡಕಗೊಳಿಸಿಡಲು ದುಡಿದುದಿದೆ. ಇನ್ನೊಂದು ಕಡೆಯಿಂದ ಆತನ ದಾಸತ್ವವನ್ನು ಲೋಕದ ಅರಸುತನಕ್ಕೆ ಎರಗದ ಆಧ್ಯಾತ್ಮಿಕ ಭಿತ್ತಿಯಾಗಿ, ಕುಲದ ಕುರಿತ ನಿಲುವುಗಳನ್ನು ಪುರೋಗಾಮಿ ಪರಾಕಾಷ್ಠೆಯಾಗಿ ವಿವರಿಸಿಕೊಳ್ಳುವ ಅತಿರೇಕಗಳಿಗೂ ಇದು ಕಾರಣವಾದುದಿದೆ. ಈ ರೂಢಿವಾದ ಮತ್ತು ಅತಿರೇಕಗಳಿಂದಾಗಿ, ಕನಕನನ್ನು ವಿವರಿಸಿಕೊಳ್ಳಬಹುದಾದ ವೈವಿಧ್ಯತೆಯ ಸಾಧ್ಯತೆಯನ್ನು ಮೀರಿ, ಅಲ್ಲೊಂದು ಏಕರೂಪತೆ ನೆಲೆಗೊಂಡಿರುವುದಿದೆ. ಹೀಗಾಗಿ ಭಕ್ತಕನಕ, ದಾಸಕನಕ, ತಳಮೂಲದ ನಿರಂಕುಶ ಕನಕ ಎಂಬ ಉಪನಾಮಗಳ ಬೇಲಿಯೊಳಗಿಟ್ಟೇ ಕನಕನನ್ನು ಪರಿಚಯಿಸಿಕೊಡುವ ಪರಿಪಾಠ ಬೆಳೆದುಬಂದುದನ್ನೂ ಅವಶ್ಯವಾಗಿ ಗಮನಿಸಬೇಕಾಗುತ್ತದೆ.







